﻿ಕೀರ್ತ.
149.
ಯೆಹೋವನಿಗೆ ಸ್ತೋತ್ರ! ಯೆಹೋವನಿಗೆ ನೂತನ ಕೀರ್ತನೆಯನ್ನು ಹಾಡಿರಿ; ಭಕ್ತರ ಸಭೆಯಲ್ಲಿ ಆತನನ್ನು ಸ್ತುತಿಸಿರಿ. 
ಇಸ್ರಾಯೇಲರು ತಮ್ಮ ಸೃಷ್ಟಿಕರ್ತನಲ್ಲಿ ಹೆಮ್ಮೆಪಡಲಿ; ಚೀಯೋನಿನವರು ತಮ್ಮ ರಾಜನಲ್ಲಿ ಹರ್ಷಿಸಲಿ. 
ಕುಣಿಯುತ್ತಾ ಆತನ ನಾಮವನ್ನು ಕೀರ್ತಿಸಲಿ; ದಮ್ಮಡಿ, ಕಿನ್ನರಿಗಳಿಂದ ಆತನನ್ನು ಭಜಿಸಲಿ. 
ಯೆಹೋವನು ತನ್ನ ಪ್ರಜೆಗೆ ಪ್ರಸನ್ನನಾದನು; ದೀನರನ್ನು ರಕ್ಷಣೆಯಿಂದ ಭೂಷಿಸುತ್ತಾನೆ. 
ಭಕ್ತರು ತಮಗುಂಟಾದ ಮಹಿಮೆಯಲ್ಲಿ ಹಿಗ್ಗಲಿ; ಹಾಸಿಗೆಯ ಮೇಲಿರುವಾಗಲೂ ಉತ್ಸಾಹಧ್ವನಿ ಮಾಡಲಿ. 
ಅವರ ಬಾಯಲ್ಲಿ ಯೆಹೋವನ ಸ್ತೋತ್ರವೂ, ಕೈಯಲ್ಲಿ ಇಬ್ಬಾಯಿಕತ್ತಿಯೂ ಇರಲಿ. 
ಅವರು ಜನಾಂಗಗಳಿಗೆ ಮುಯ್ಯಿತೀರಿಸುವರು; ಅನ್ಯಜನಗಳನ್ನು ದಂಡಿಸುವರು; 
ಅವರ ರಾಜರನ್ನು ಸಂಕೋಲೆಯಿಂದ ಬಂಧಿಸುವರು; ಪ್ರಭುಗಳಿಗೆ ಕಬ್ಬಿಣದ ಬೇಡಿಗಳನ್ನು ಹಾಕುವರು. 
ಲಿಖಿತದಂತೆ ಅವರಿಗೆ ಶಿಕ್ಷೆಯನ್ನು ವಿಧಿಸುವರು; ಇದು ಆತನ ಭಕ್ತರೆಲ್ಲರಿಗೆ ಗೌರವವಾಗಿರುವುದು. ಯೆಹೋವನಿಗೆ ಸ್ತೋತ್ರ. 
