﻿ಕೀರ್ತ.
50.
ಆಸಾಫನ ಕೀರ್ತನೆ. ಬಲಿಷ್ಠ ದೇವರಾದ ಯೆಹೋವನು ಪೂರ್ವದಿಂದ ಪಶ್ಚಿಮ ದಿಕ್ಕಿನವರೆಗೂ ಇರುವ ಭೂನಿವಾಸಿಗಳೆಲ್ಲರನ್ನೂ, ತನ್ನ ಸನ್ನಿಧಿಯಲ್ಲಿ ಬರಬೇಕೆಂದು ಕರೆಯುತ್ತಾನೆ. 
ಅತ್ಯಂತ ರಮಣೀಯವಾದ ಚೀಯೋನಿನಲ್ಲಿರುವ, ದೇವರು ಪ್ರಕಾಶಿಸುತ್ತಾನೆ. 
ನಮ್ಮ ದೇವರು ಪ್ರತ್ಯಕ್ಷನಾಗುವನು, ಎಷ್ಟು ಮಾತ್ರವೂ ಸುಮ್ಮನಿರುವುದಿಲ್ಲ; ಆತನ ಮುಂಭಾಗದಲ್ಲಿ ಬೆಂಕಿ ಪ್ರಜ್ವಲಿಸುತ್ತದೆ; ಆತನ ಸುತ್ತಲು ಬಿರುಗಾಳಿ ಬೀಸುತ್ತದೆ. 
ಆತನು ತನ್ನ ಪ್ರಜೆಗಳ ನ್ಯಾಯವಿಚಾರಣೆಯಲ್ಲಿ ಭೂಮ್ಯಾಕಾಶಗಳನ್ನು ಸಾಕ್ಷಿಗಳನ್ನಾಗಿ ನೇಮಿಸುತ್ತಾನೆ. 
“ನನ್ನೊಡನೆ ಯಜ್ಞದ ಮೂಲಕ ಒಡಂಬಡಿಕೆಯನ್ನು ಮಾಡಿಕೊಂಡ ನನ್ನ ಭಕ್ತರನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ” ಎಂದು ಆಜ್ಞಾಪಿಸುತ್ತಾನೆ. 
ದೇವರು ತಾನೇ ನ್ಯಾಯಾಧಿಪತಿ; ಆತನು ನೀತಿಸ್ವರೂಪನೆಂದು ಆಕಾಶಮಂಡಲವು ಘೋಷಿಸುತ್ತದೆ. ಸೆಲಾ 
ಆತನು ಆಜ್ಞಾಪಿಸುವುದು ಏನೆಂದರೆ, “ಪ್ರಜೆಗಳಿರಾ, ಇಸ್ರಾಯೇಲ್ಯರೇ, ದೇವರಾದ ನಾನೇ ನಿಮ್ಮ ದೇವರು; ನಿಮಗೆ ಖಂಡಿತವಾಗಿ ಹೇಳುತ್ತೇನೆ” ಕೇಳಿರಿ. 
ನಾನು ನಿಮ್ಮ ಯಜ್ಞದ ವಿಷಯದಲ್ಲಿ ತಪ್ಪೆಣಿಸುವುದಿಲ್ಲ; ಸರ್ವಾಂಗಹೋಮಗಳನ್ನು ನೀವು ನಿತ್ಯವೂ ನನಗೆ ಸಮರ್ಪಿಸುತ್ತೀರಲ್ಲಾ. 
ಆದರೂ ನಿಮ್ಮ ಮನೆಗಳಿಂದ ನನಗೆ ಹೋರಿ ಬೇಕಾಗಿಲ್ಲ; ನಿಮ್ಮ ದೊಡ್ಡಿಗಳಿಂದ ಹೋತ ಬೇಕಿಲ್ಲ. 
ಕಾಡಿನಲ್ಲಿರುವ ಸರ್ವಮೃಗಗಳೂ, ಗುಡ್ಡಗಳಲ್ಲಿರುವ ಸಾವಿರಾರು ಪಶುಗಳೂ ನನ್ನವೇ. 
ಬೆಟ್ಟಗಳ ಪಕ್ಷಿಗಳನ್ನೆಲ್ಲಾ ನಾನು ಬಲ್ಲೆ; ಅಡವಿಯ ಜೀವಜಂತುಗಳೆಲ್ಲಾ ನನಗೆ ಗೊತ್ತುಂಟು. 
ನನಗೆ ಹಸಿವೆಯಿದ್ದರೆ ನಿಮಗೆ ತಿಳಿಸುವುದಿಲ್ಲ; ಏಕೆಂದರೆ ಲೋಕವೂ ಅದರಲ್ಲಿರುವುದೆಲ್ಲವೂ ನನ್ನದಲ್ಲವೇ. 
ನಾನು ಹೋರಿಗಳ ಮಾಂಸವನ್ನು ತಿನ್ನುವುದೂ, ಹೋತಗಳ ರಕ್ತವನ್ನು ಕುಡಿಯುವುದೂ ಉಂಟೇ? 
ಸ್ತುತಿಯಜ್ಞವನ್ನೇ ದೇವರಿಗೆ ಸಮರ್ಪಿಸಿರಿ; ವಾಗ್ದಾನ ಮಾಡಿದ ಹರಕೆಗಳನ್ನು ಪರಾತ್ಪರನಾದ ದೇವರಿಗೆ ಸಲ್ಲಿಸಿರಿ. 
ಕಷ್ಟಕಾಲದಲ್ಲಿ ನನಗೆ ಮೊರೆಯಿಡಿರಿ, ಬಿಡಿಸುವೆನು; ಆಗ ನನ್ನನ್ನು ಕೊಂಡಾಡುವಿರಿ. 
ದುಷ್ಟರಿಗಾದರೋ ದೇವರು ಹೇಳುವುದು ಏನೆಂದರೆ, “ನನ್ನ ವಿಧಿಗಳನ್ನು ಹೇಳುವುದಕ್ಕೆ ನಿಮಗೇನು ಬಾಧ್ಯತೆ ಉಂಟು? ನನ್ನ ಒಡಂಬಡಿಕೆಯನ್ನು ನಿಮ್ಮ ಬಾಯಲ್ಲಿ ಉಚ್ಚರಿಸುವುದೇಕೆ? 
ನೀವೋ ನನ್ನ ಸುಶಿಕ್ಷಣವನ್ನು ಹಗೆಮಾಡುತ್ತೀರಲ್ಲಾ; ನನ್ನ ಆಜ್ಞೆಯನ್ನು ಉಲ್ಲಂಘಿಸುತ್ತೀರಿ. 
ನೀವು ಕಳ್ಳರೊಡನೆ ಸೇರಿ ಅವರಿಗೆ ಸಮ್ಮತಿ ನೀಡುತ್ತೀರಿ; ಜಾರರ ಒಡನಾಟದಲ್ಲಿ ನೀವು ಸಂತೋಷದಿಂದ ಇರುತ್ತೀರಿ. 
ನಿಮ್ಮ ಬಾಯಿಯನ್ನು ಕೇಡಿಗೆ ಒಪ್ಪಿಸುತ್ತೀರಿ; ನಾಲಿಗೆಯು ಮೋಸವನ್ನು ನೇಯುತ್ತದೆ. 
ನೀವು ಕುಳಿತುಕೊಂಡು ನಿಮ್ಮ ಸಹೋದರರ ವಿರುದ್ಧವಾಗಿ ಮಾತನಾಡುತ್ತೀರಿ; ನಿಮ್ಮ ಒಡಹುಟ್ಟಿದವರನ್ನು ದೂರುತ್ತೀರಿ. 
ನೀವು ಹೀಗೆ ಮಾಡಿದರೂ ನಾನು ಮೌನವಾಗಿದ್ದೆನು. ಆದುದರಿಂದ, ‘ದೇವರೂ ನಮ್ಮಂಥವನೇ’ ಎಂದು ತಿಳಿದುಕೊಂಡಿರಿ. ಈಗಲಾದರೋ ನಾನು ಎಲ್ಲವನ್ನು, ನಿಮ್ಮ ಮುಂದೆ ವಿವರಿಸಿ ನಿಮ್ಮನ್ನು ಅಪರಾಧಿಗಳೆಂದು ಸ್ಥಾಪಿಸುವೆನು. 
ದೇವರನ್ನು ಬಿಟ್ಟವರೇ, ಇದನ್ನು ಮನದಟ್ಟು ಮಾಡಿಕೊಳ್ಳಿರಿ; ಇಲ್ಲವಾದರೆ ನಿಮ್ಮನ್ನು ಹರಿದುಬಿಟ್ಟೇನು. ನಿಮ್ಮನ್ನು ತಪ್ಪಿಸುವವರು ಯಾರೂ ಇರುವುದಿಲ್ಲ. 
ಯಾರು ಸ್ತುತಿಯಜ್ಞವನ್ನು ಸಮರ್ಪಿಸುತ್ತಾರೋ ಅವರೇ ನನ್ನನ್ನು ಗೌರವಿಸುವವರು; ತಮ್ಮ ನಡತೆಯನ್ನು ಸರಿಪಡಿಸಿಕೊಳ್ಳುವವರಿಗೆ ನನ್ನ ವಿಶೇಷವಾದ ರಕ್ಷಣೆಯನ್ನು ತೋರಿಸುವೆನು.” 
