﻿ಕೀರ್ತ.
38.
ದಾವೀದನ ಕೀರ್ತನೆ; ಜ್ಞಾಪಕಾರ್ಥ ನೈವೇದ್ಯಸಮರ್ಪಣೆಯಲ್ಲಿ ಹಾಡತಕ್ಕದ್ದು. ಯೆಹೋವನೇ, ಕೋಪದಿಂದ ನನ್ನನ್ನು ಶಿಕ್ಷಿಸಬೇಡ; ರೋಷದಿಂದ ನನ್ನನ್ನು ದಂಡಿಸಬೇಡ. 
ನಿನ್ನ ಬಾಣಗಳು ನನ್ನೊಳಗೆ ಹೊಕ್ಕಿವೆ; ನಿನ್ನ ಶಿಕ್ಷಾಹಸ್ತವು ನನ್ನ ಮೇಲೆ ಭಾರವಾಗಿದೆ. 
ನಿನ್ನ ಸಿಟ್ಟಿನಿಂದ ನನ್ನ ಶರೀರದಲ್ಲಿ ಸ್ವಸ್ಥತೆ ತಪ್ಪಿ ಹೋಗಿದೆ; ನನ್ನ ಪಾಪದಿಂದ ನನ್ನ ಎಲುಬುಗಳಲ್ಲಿ ಸ್ವಲ್ಪವೂ ಕ್ಷೇಮವಿಲ್ಲ. 
ನನ್ನ ಅಪರಾಧಗಳು ನನ್ನನ್ನು ಮುಳುಗಿಸಿಬಿಟ್ಟಿವೆ; ಅವು ಹೊರಲಾರದಷ್ಟು ಭಾರವಾದ ಹೊರೆಯಂತಿವೆ. 
ನನ್ನ ಮೂರ್ಖತನದ ಫಲವಾದ ಬಾಸುಂಡೆಗಳು, ಕೀವು ಸೋರಿ ದುರ್ವಾಸನೆಯಿಂದ ನಾರುತ್ತಿದೆ. 
ನಾನು ಬಹಳವಾಗಿ ಬಾಗಿ ಕುಗ್ಗಿದ್ದೇನೆ; ಯಾವಾಗಲೂ ದುಃಖದಿಂದ ವಿಕಾರಿಯಾಗಿ ಅಲೆಯುತ್ತೇನೆ. 
ನನ್ನ ಸೊಂಟಕ್ಕೆ ಉರಿಬಡಿದಂತಿದೆ; ನನ್ನ ದೇಹದಲ್ಲಿ ಸ್ವಲ್ಪವಾದರೂ ಕ್ಷೇಮವಿಲ್ಲ. 
ನನಗೆ ಜೋಮುಹಿಡಿದಂತಿದೆ; ಬಹಳ ಮನಗುಂದಿದವನಾದೆನು. ಹೃದಯದ ಸಂಕಟದ ದೆಸೆಯಿಂದ ಅರಚಿಕೊಳ್ಳುತ್ತಾ ಇದ್ದೇನೆ. 
ಕರ್ತನೇ, ನನ್ನ ಅಪೇಕ್ಷೆ ನಿನಗೆ ಗೊತ್ತುಂಟು; ನನ್ನ ನಿಟ್ಟುಸಿರು ನಿನಗೆ ಮರೆಯಾಗಿಲ್ಲ. 
ನನ್ನ ಹೃದಯವು ಬಡಿದುಕೊಳ್ಳುತ್ತಿದೆ; ನನ್ನ ಚೈತನ್ಯವು ಕುಗ್ಗಿಹೋಯಿತು; ನನ್ನ ಕಣ್ಣುಗಳೂ ಮೊಬ್ಬಾಗಿ ಹೋದವು. 
ನನ್ನ ಆಪ್ತಸ್ನೇಹಿತರು ಮತ್ತು ಜೊತೆಗಾರರು, ನನ್ನ ರೋಗವನ್ನು ನೋಡಿ ಓರೆಯಾಗಿ ಹೋಗುತ್ತಾರೆ; ನನ್ನ ಬಂಧುಗಳು ದೂರ ನಿಲ್ಲುತ್ತಾರೆ. 
ನನ್ನ ಪ್ರಾಣವನ್ನು ತೆಗೆಯಬೇಕೆನ್ನುವವರು ನನಗೆ ಉರುಲುಗಳನ್ನು ಒಡ್ಡಿದ್ದಾರೆ; ನನ್ನ ವಿಪತ್ತನ್ನು ಕೋರುವವರು ನನಗೆ ನಾಶನವನ್ನೇ ನಿಶ್ಚಯಿಸಿಕೊಂಡು, ಯಾವಾಗಲೂ ಮೋಸವನ್ನು ಕಲ್ಪಿಸುತ್ತಿದ್ದಾರೆ. 
ನಾನಂತೂ ಕಿವುಡನಂತೆ ಕೇಳದವನಾಗಿದ್ದೇನೆ; ಮೂಕನಂತೆ ಬಾಯಿ ತೆರೆಯುವುದೇ ಇಲ್ಲ. 
ನಾನು ಕಿವಿ ಕೇಳಿಸದವನಂತೆಯೂ, ಪ್ರತ್ಯುತ್ತರ ಕೊಡಲಾರದವನಂತೆಯೂ ಆದೆನು. 
ಯೆಹೋವನೇ, ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇನೆ; ನನ್ನ ಕರ್ತನೇ, ನನ್ನ ದೇವರೇ, ನೀನೇ ಸದುತ್ತರವನ್ನು ಕೊಡುವವನು. 
“ನನ್ನ ವಿಷಯದಲ್ಲಿ ಶತ್ರುಗಳಿಗೆ ಸಂತೋಷವಾಗಬಾರದು; ನಾನು ಜಾರಿಬಿದ್ದರೆ ಹಿಗ್ಗಬಾರದು” ಅಂದುಕೊಂಡೆನು. 
ನನಗೆ ಆಪತ್ತೇ ಸಿದ್ಧವಾಗಿದೆ; ಯಾವಾಗಲೂ ನನಗೆ ಸಂಕಟವಿದೆ. 
ನಾನು ಅಪರಾಧಿಯೇ ಎಂದು ಒಪ್ಪಿಕೊಳ್ಳುತ್ತೇನೆ; ನನ್ನ ಪಾಪದ ದೆಸೆಯಿಂದಲೇ ನನಗೆ ವ್ಯಸನವುಂಟಾಯಿತು. 
ನನ್ನ ಶತ್ರುಗಳು ಚುರುಕಾದವರೂ, ಬಲಿಷ್ಠರೂ ಆಗಿದ್ದಾರೆ; ನನ್ನನ್ನು ಅನ್ಯಾಯವಾಗಿ ದ್ವೇಷಿಸುವವರು ಬಹು ಜನ. 
ನಾನು ಒಳ್ಳೆಯದನ್ನು ಅನುಸರಿಸುವುದರಿಂದ, ನನ್ನ ಎದುರಾಳಿಗಳು ಉಪಕಾರಕ್ಕೆ ಪ್ರತಿಯಾಗಿ ಅಪಕಾರವನ್ನೇ ಸಲ್ಲಿಸುವರು. 
ಯೆಹೋವನೇ, ಕೈ ಬಿಡಬೇಡ; ನನ್ನ ದೇವರೇ, ದೂರವಾಗಿರಬೇಡ. 
ನನ್ನ ಕರ್ತನೇ, ನನ್ನ ರಕ್ಷಕನೇ, ಬೇಗ ಬಂದು ಸಹಾಯಮಾಡು. 
