﻿ಕೀರ್ತ.
33.
ನೀತಿವಂತರೇ, ಯೆಹೋವನ ವಿಷಯದಲ್ಲಿ ಉಲ್ಲಾಸಪಡಿರಿ; ಯಥಾರ್ಥಚಿತ್ತರು ಆತನನ್ನು ಸ್ತುತಿಸುವುದು ಯುಕ್ತವಾಗಿದೆ. 
ಕಿನ್ನರಿಯನ್ನು ನುಡಿಸುತ್ತಾ ಯೆಹೋವನನ್ನು ಕೊಂಡಾಡಿರಿ; ಹತ್ತುತಂತಿಗಳ ಸ್ವರಮಂಡಲವನ್ನು ನುಡಿಸುತ್ತಾ ಸಂಕೀರ್ತಿಸಿರಿ. 
ಆತನ ಘನಕ್ಕಾಗಿ ನೂತನ ಕೀರ್ತನೆಯನ್ನು ಹಾಡಿರಿ; ಉತ್ಸಾಹಧ್ವನಿಯೊಡನೆ ಇಂಪಾಗಿ ಬಾರಿಸಿರಿ. 
ಯೆಹೋವನ ವಚನವು ಯಥಾರ್ಥವಾದದ್ದು; ಆತನ ಕೃತ್ಯವೆಲ್ಲಾ ನಂಬಿಕೆಯುಳ್ಳದ್ದಾಗಿವೆ. 
ಆತನು ನೀತಿ ಮತ್ತು ನ್ಯಾಯಗಳನ್ನು ಪ್ರೀತಿಸುವವನು; ಭೂಲೋಕವೆಲ್ಲಾ ಯೆಹೋವನ ಕೃಪೆಯಿಂದ ತುಂಬಿದೆ. 
ಯೆಹೋವನ ಅಪ್ಪಣೆಯಿಂದಲೇ ಆಕಾಶವು ಉಂಟಾಯಿತು; ಅದರಲ್ಲಿರುವುದೆಲ್ಲವೂ ಆತನ ಶ್ವಾಸದಿಂದ ನಿರ್ಮಿತವಾಯಿತು. 
ನೀರುಗಳನ್ನು ಒಟ್ಟುಗೂಡಿಸಿ ಸಮುದ್ರವನ್ನು ಮಾಡಿದವನು ಆತನೇ; ಭೂಮಿಯ ಕೆಳಗೆ ಜಲಾಶಯಗಳನ್ನು ಇಟ್ಟವನು ಆತನೇ. 
ಭೂಲೋಕದವರೆಲ್ಲರೂ ಯೆಹೋವನಿಗೆ ಭಯಪಡಲಿ; ಭೂನಿವಾಸಿಗಳೆಲ್ಲರೂ ಆತನಿಗೆ ಹೆದರಲಿ. 
ಆತನು ನುಡಿದ ಮಾತ್ರಕ್ಕೆ ಸಮಸ್ತವೂ ಉಂಟಾಯಿತು; ಆತನು ಆಜ್ಞಾಪಿಸುತ್ತಲೇ ಸರ್ವವೂ ಸ್ಥಾಪನೆಯಾಯಿತು. 
ಯೆಹೋವನು ಅನ್ಯಜನರ ಸಂಕಲ್ಪಗಳನ್ನು ವ್ಯರ್ಥಮಾಡುತ್ತಾನೆ; ಅವರ ಯೋಚನೆಗಳನ್ನು ನಿಷ್ಫಲಮಾಡುತ್ತಾನೆ. 
ಯೆಹೋವನ ಆಲೋಚನೆಯೋ ಶಾಶ್ವತವಾಗಿಯೇ ನಿಲ್ಲುವುದು; ಆತನ ಸಂಕಲ್ಪವು ಎಂದಿಗೂ ಕದಲುವುದಿಲ್ಲ. 
ಯಾರಿಗೆ ಯೆಹೋವನೇ ದೇವರಾಗಿದ್ದಾನೋ, ಯಾವ ಜನಾಂಗದವರನ್ನು ಸ್ವಕೀಯರನ್ನಾಗಿ ಆದುಕೊಂಡಿದ್ದಾನೋ ಅವರೇ ಧನ್ಯರು. 
ಯೆಹೋವನು ಆಕಾಶದಿಂದ ಮನುಷ್ಯರೆಲ್ಲರನ್ನು ನೋಡುತ್ತಾನೆ; 
ತಾನಿರುವ ಸ್ಥಾನದಿಂದ ಭೂನಿವಾಸಿಗಳೆಲ್ಲರನ್ನು ದೃಷ್ಟಿಸುತ್ತಾನೆ. 
ಅವರೆಲ್ಲರ ಹೃದಯಗಳನ್ನು ನಿರ್ಮಿಸಿದವನೂ, ಅವರ ಕೃತ್ಯಗಳನ್ನೆಲ್ಲಾ ವಿವೇಚಿಸುವವನೂ ಆತನೇ. 
ಮಹಾ ಸೇನಾಬಲದಿಂದಲೇ ಯಾವ ಅರಸನಿಗೂ ಜಯವಾಗುವುದಿಲ್ಲ; ಯಾವ ಶೂರನೂ ಅಧಿಕವಾದ ಭುಜಬಲದಿಂದ ಸುರಕ್ಷಿತನಾಗುವುದಿಲ್ಲ. 
ಜೀವದ ರಕ್ಷಣೆಗಾಗಿ ಕುದುರೆಯು ಪ್ರಯೋಜನವಿಲ್ಲ; ಅದು ತನ್ನ ವಿಶೇಷಬಲದಿಂದ ಯಾರನ್ನೂ ರಕ್ಷಿಸಲಾರದು. 
ಯೆಹೋವನಾದರೋ ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕಟಾಕ್ಷಿಸುತ್ತಾನೆ; ತನ್ನ ಕೃಪೆಯನ್ನು ನಿರೀಕ್ಷಿಸುವವರನ್ನು ಲಕ್ಷಿಸುತ್ತಾನೆ. 
ಅವರ ಪ್ರಾಣವನ್ನು ಮರಣದಿಂದ ತಪ್ಪಿಸುವನು; ಬರಗಾಲದಲ್ಲಿ ಅವರ ಜೀವವನ್ನು ಉಳಿಸುವನು. 
ನಮ್ಮ ಮನಸ್ಸು ಯೆಹೋವನಿಗೋಸ್ಕರ ಕಾದಿದೆ; ನಮ್ಮ ಸಹಾಯವೂ, ಗುರಾಣಿಯೂ ಆತನೇ. 
ಆತನಲ್ಲಿ ನಮ್ಮ ಹೃದಯವು ಸಂತೋಷಿಸುವುದು; ಆತನ ಪರಿಶುದ್ಧನಾಮದಲ್ಲಿ ಭರವಸವಿಟ್ಟಿದ್ದೇವೆ. 
ಯೆಹೋವನೇ, ನಾವು ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇವೆ; ನಿನ್ನ ಕೃಪೆಯು ನಮ್ಮ ಮೇಲೆ ಇರಲಿ. 
