﻿ಕೀರ್ತ.
26.
ದಾವೀದನ ಕೀರ್ತನೆ. ಯೆಹೋವನೇ, ನನಗೋಸ್ಕರ ನ್ಯಾಯವನ್ನು ನಿರ್ಣಯಿಸು. ನಾನಾದರೋ ನಿರ್ದೋಷಿಯಾಗಿಯೇ ನಡೆದುಕೊಂಡಿದ್ದೇನೆ. ನಾನು ಕದಲದೆ ಯೆಹೋವನಲ್ಲೇ ಭರವಸವಿಟ್ಟಿದ್ದೇನೆ. 
ಯೆಹೋವನೇ, ನನ್ನನ್ನು ಪರೀಕ್ಷಿಸು, ಪರಿಶೀಲಿಸು; ನನ್ನ ಅಂತರಿಂದ್ರಿಯವನ್ನೂ, ಹೃದಯವನ್ನೂ ಪರಿಶೋಧಿಸು. 
ನಿನ್ನ ಶಾಶ್ವತವಾದ ಪ್ರೀತಿಯನ್ನು ನನ್ನ ದೃಷ್ಟಿಯಲ್ಲೇ ಇಟ್ಟುಕೊಂಡಿದ್ದೇನೆ; ನಿನಗೆ ನಂಬಿಗಸ್ತನಾಗಿ ನಡೆದುಕೊಂಡಿದ್ದೇನೆ. 
ನಾನು ಮೋಸಗಾರರ ಸಹವಾಸ ಮಾಡುವವನಲ್ಲ; ಕಪಟಿಗಳನ್ನು ಸೇರುವವನಲ್ಲ. 
ನನಗೆ ದುರ್ಜನರ ಕೂಟವು ಅಸಹ್ಯ; ದುಷ್ಟರ ಸಂಗವು ಬೇಕಿಲ್ಲ. 
ಯೆಹೋವನೇ, ನಾನು ನಿರ್ದೋಷಿ ಎಂದು, ಕೈಗಳನ್ನು ತೊಳೆದುಕೊಂಡವನಾಗಿ, 
ನಿನ್ನ ಅದ್ಭುತಕೃತ್ಯಗಳ ವರ್ಣನೆಯ ಸ್ತೋತ್ರ ಮಾಡುತ್ತಾ, ನಿನ್ನ ಯಜ್ಞವೇದಿಯನ್ನು ಪ್ರದಕ್ಷಿಣೆಮಾಡುವೆನು. 
ಯೆಹೋವನೇ, ನಿನ್ನ ನಿವಾಸವು ನನಗೆ ಎಷ್ಟೋ ಪ್ರಿಯ; ನಿನ್ನ ಪ್ರಭಾವ ಸ್ಥಾನವು ನನಗೆ ಇಷ್ಟ. 
ಪಾಪಿಷ್ಠರ ಪ್ರಾಣದ ಸಂಗಡ ನನ್ನ ಪ್ರಾಣವನ್ನೂ ತೆಗೆಯಬೇಡ; ಕೊಲೆಪಾತಕರ ಜೀವದೊಂದಿಗೆ ನನ್ನ ಜೀವವನ್ನೂ ತೆಗೆಯಬೇಡ. 
ಅವರ ಕೈಗಳು ಬಲಾತ್ಕಾರ ನಡೆಸುತ್ತವೆ; ಅವರ ಬಲಗೈ ಲಂಚದಿಂದ ತುಂಬಿದೆ. 
ನಾನಾದರೋ ನಿರ್ದೋಷಿಯಾಗಿಯೇ ನಡೆದುಕೊಳ್ಳುವವನು; ಯೆಹೋವನೇ, ಅವರಿಂದ ನನ್ನನ್ನು ವಿಮೋಚಿಸಿ ಪ್ರಸನ್ನನಾಗಿರು. 
ನನ್ನ ಪಾದವು ಸಮಭೂಮಿಯಲ್ಲಿ ನಿಂತಿದೆ; ಕೂಡಿದ ಸಭೆಯಲ್ಲಿ ಯೆಹೋವನನ್ನು ಕೊಂಡಾಡುವೆನು. 
