﻿ಕೀರ್ತನೆ.
75.
ಸ್ತುತಿಗೀತೆ. ರಚನೆಗಾರ: ಆಸಾಫ. ದೇವರೇ, ನಿನ್ನನ್ನು ಕೊಂಡಾಡುವೆವು! ನಿನ್ನ ಹೆಸರನ್ನು ಸ್ತ್ತುತಿಸುವೆವು; ಯಾಕೆಂದರೆ ನೀನು ನನ್ನ ಸಾಮಿಪ್ಯದಲ್ಲಿರುವೆ; ನಿನ್ನ ಮಹತ್ಕಾರ್ಯಗಳ ಬಗ್ಗೆ ಜನರು ಹೇಳುತ್ತಲೇ ಇದ್ದಾರೆ. 
ದೇವರು ಹೀಗೆನ್ನುತ್ತಾನೆ: “ನಾನು ನ್ಯಾಯತೀರ್ಪಿಗಾಗಿ ತಕ್ಕ ಸಮಯವನ್ನು ಗೊತ್ತುಪಡಿಸುವೆ; ನಾನು ನೀತಿಯಿಂದಲೇ ತೀರ್ಪುಕೊಡುವೆ. 
ಭೂಮಿಯು ಅದರ ಮೇಲಿರುವ ಸಮಸ್ತದೊಡನೆ ನಡುಗುತ್ತಿದ್ದರೂ ಭೂಸ್ತಂಭಗಳನ್ನು ಸ್ಥಿರಗೊಳಿಸುವಾತನು ನಾನೇ. 
“ಗರ್ವಿಷ್ಠರೇ, ‘ಕೊಚ್ಚಿಕೊಳ್ಳಬೇಡಿ’ ದುಷ್ಟರೇ, ‘ಅಹಂಕಾರ ಪಡಬೇಡಿ! ಸೊಕ್ಕಿನ ಕುತ್ತಿಗೆಯಿಂದ ಮಾತಾಡಬೇಡಿ’” ಎಂದು ಹೇಳುವೆನು. 
ಭೂಲೋಕದ ಯಾವ ಶಕ್ತಿಯೂ ಮನುಷ್ಯನನ್ನು ಉದ್ಧಾರ ಮಾಡಲಾರದು. 
ನ್ಯಾಯಾಧಿಪತಿಯು ದೇವರೇ. ಯಾರನ್ನು ಉದ್ಧಾರಮಾಡಬೇಕು ಎಂಬ ನಿರ್ಣಯವನ್ನು ತೆಗೆದುಕೊಳ್ಳುವಾತನು ದೇವರೇ. ದೇವರು ಒಬ್ಬನನ್ನು ಉನ್ನತಿಗೇರಿಸುವನು; ಮತ್ತೊಬ್ಬನನ್ನು ಅವನತಿಗಿಳಿಸುವನು. 
ಯೆಹೋವನ ಕೈಯಲ್ಲಿ ಪಾತ್ರೆಯಿದೆ. ಆ ಪಾತ್ರೆಯು ವಿಷದ್ರಾಕ್ಷಾರಸದಿಂದ ತುಂಬಿದೆ. ಆತನು ದಂಡನೆಯೆಂಬ ಆ ವಿಷ ದ್ರಾಕ್ಷಾರಸವನ್ನು ಸುರಿಯುವನು; ದುಷ್ಟರು ಕೊನೆಯ ತೊಟ್ಟಿನವರೆಗೂ ಅದನ್ನು ಕುಡಿಯುವರು! 
ನಾನು ಇವುಗಳ ಬಗ್ಗೆ ಜನರಿಗೆ ಹೇಳುತ್ತಲೇ ಇರುವೆನು; ಇಸ್ರೇಲರ ದೇವರನ್ನು ಸಂಕೀರ್ತಿಸುವೆನು. 
ದುಷ್ಟರಿಂದ ಅಧಿಕಾರವನ್ನು ಕಿತ್ತುಕೊಂಡು ಒಳ್ಳೆಯವರಿಗೆ ಅದನ್ನು ಒಪ್ಪಿಸಿಕೊಡುವೆನು. 
