﻿ಕೀರ್ತನೆ.
48.
ರಚನೆಗಾರರು: ಕೋರಹೀಯರು ಯೆಹೋವನೇ ಮಹೋನ್ನತನು. ನಮ್ಮ ದೇವರನ್ನು ಆತನ ಪವಿತ್ರ ಪರ್ವತ ಪಟ್ಟಣದಲ್ಲಿ ಜನರು ಬಹಳವಾಗಿ ಕೊಂಡಾಡುವರು. 
ದೇವರ ಪವಿತ್ರ ಪಟ್ಟಣವು ರಮ್ಯವಾಗಿದೆ. ಭೂಲೋಕದಲ್ಲೆಲ್ಲಾ ಇರುವ ಜನರನ್ನು ಅದು ಸಂತೋಷಗೊಳಿಸುವುದು. ಸಿಯೋನ್ ಪರ್ವತವೇ ದೇವರ ನಿಜವಾದ ಪರ್ವತ. ಅದೇ ಆ ಮಹಾರಾಜನ ಪರ್ವತ. 
ದೇವರು ಆ ಪಟ್ಟಣಗಳ ಅರಮನೆಗಳಲ್ಲಿ, ತಾನೇ ಆಶ್ರಯದುರ್ಗವೆಂದು ಹೆಸರುವಾಸಿಯಾಗಿದ್ದಾನೆ. 
ಒಮ್ಮೆ, ಕೆಲವು ರಾಜರು ಒಟ್ಟಾಗಿ ಸೇರಿಬಂದರು. ಆ ಪಟ್ಟಣದ ಮೇಲೆ ದಾಳಿ ಮಾಡಲೆಂದು ಅವರೆಲ್ಲ ಅದರತ್ತ ನಡೆದರು. 
ಆದರೆ ಅವರು ಅದನ್ನು ಕಂಡಾಗ ದಿಗ್ಭ್ರಮೆಗೊಂಡರು; ಭಯದಿಂದ ಓಡಿಹೋದರು. 
ಭಯವು ಅವರನ್ನು ಪ್ರಸವವೇದನೆಯಂತೆ ಆವರಿಸಿಕೊಂಡಿತು. 
ಪೂರ್ವದ ಬಿರುಗಾಳಿಯಿಂದ ಒಡೆದುಹೋದ ಹಡಗುಗಳಂತೆ ನೀನು ಅವರನ್ನು ನಾಶಮಾಡಿದೆ. 
ಹೌದು, ಆ ರಾಜರುಗಳಿಗೆ ಸಂಭವಿಸಿದ್ದನ್ನು ನಾವು ಕಿವಿಯಾರೆ ಕೇಳಿದಂತೆಯೇ ಕಣ್ಣಾರೆಯೂ ಕಂಡೆವು. ನಮ್ಮ ದೇವರೂ ಸೇನಾಧೀಶ್ವರನೂ ಆಗಿರುವ ಯೆಹೋವನ ಪಟ್ಟಣದಲ್ಲಿ ನಾವು ಅದನ್ನು ನೋಡಿದ್ದೇವೆ. ದೇವರು ಆ ಪಟ್ಟಣವನ್ನು ಶಾಶ್ವತವಾಗಿ ಭದ್ರಗೊಳಿಸುವನು. 
ದೇವರೇ, ನಿನ್ನ ಆಲಯದಲ್ಲಿ ನಿನ್ನ ಶಾಶ್ವತ ಪ್ರೀತಿಯ ಕುರಿತು ಧ್ಯಾನಿಸುವೆವು. 
ದೇವರೇ, ನೀನು ಪ್ರಖ್ಯಾತನಾಗಿರುವೆ. ಭೂಮಿಯ ಮೇಲೆಲ್ಲಾ ಜನರು ನಿನ್ನನ್ನು ಕೊಂಡಾಡುವರು. ನೀನು ಎಷ್ಟು ಒಳ್ಳೆಯವನೆಂಬುದು ಪ್ರತಿಯೊಬ್ಬರಿಗೂ ತಿಳಿದಿದೆ. 
ನಿನ್ನ ನ್ಯಾಯನಿರ್ಣಯಗಳಿಂದ ಚೀಯೋನ್ ಪರ್ವತವು ಹರ್ಷಿಸಲಿ; ಯೆಹೂದದ ಊರುಗಳು ಉಲ್ಲಾಸಿಸಲಿ. 
ಚೀಯೋನಿನ ಸುತ್ತಲೂ ಸಂಚರಿಸಿ, ಆ ಪಟ್ಟಣವನ್ನು ನೋಡಿರಿ. ಅದರ ಬುರುಜುಗಳನ್ನು ಎಣಿಸಿರಿ. 
ಅದರ ಕೋಟೆಗಳನ್ನು ನೋಡಿರಿ. ಚೀಯೋನಿನ ಅರಮನೆಗಳನ್ನು ಹೊಗಳಿರಿ. ಆಗ ನೀವು ನಿಮ್ಮ ಮುಂದಿನ ಸಂತತಿಯವರಿಗೆ ಅದರ ಬಗ್ಗೆ ಹೇಳಬಲ್ಲಿರಿ. 
ಈ ದೇವರೇ ಎಂದೆಂದಿಗೂ ನಮ್ಮ ದೇವರು! ನಮ್ಮನ್ನು ಶಾಶ್ವತವಾಗಿ ನಡೆಸುವಾತನು ಆತನೇ! 
