﻿ಕೀರ್ತನೆ.
12.
ರಚನೆಗಾರ: ದಾವೀದ. ಯೆಹೋವನೇ, ನನ್ನನ್ನು ರಕ್ಷಿಸು! ಒಳ್ಳೆಯವರೆಲ್ಲಾ ಕೊನೆಗೊಂಡರು. ಭೂನಿವಾಸಿಗಳಲ್ಲಿ ನಿಜವಾದ ವಿಶ್ವಾಸಿಗಳು ಉಳಿದೇ ಇಲ್ಲ. 
ಜನರು ತಮ್ಮ ನೆರೆಯವರಿಗೆ ಸುಳ್ಳು ಹೇಳುವರು. ಪ್ರತಿಯೊಬ್ಬರೂ ತಮ್ಮ ನೆರೆಯವರಿಗೆ ಸುಳ್ಳಿನಿಂದ ಮುಖಸ್ತುತಿ ಮಾಡುವರು. 
ಸುಳ್ಳಾಡುವ ಆ ತುಟಿಗಳನ್ನೂ ಕಟ್ಟುಕಥೆಗಳನ್ನು ಹೇಳುವ ಆ ನಾಲಿಗೆಗಳನ್ನೂ ಯೆಹೋವನು ಕತ್ತರಿಸಿಹಾಕಲಿ. 
“ನಾವು ಪ್ರಮುಖರಾಗಲು ನಮ್ಮ ಸುಳ್ಳುಗಳೇ ನಮಗೆ ಆಧಾರ. ನಮ್ಮ ನಾಲಿಗೆಗಳು ಇರುವಾಗ ನಮಗೆ ಒಡೆಯರಾಗಲು ಯಾರಿಗೆ ಸಾಧ್ಯ?” ಎಂದು ಅವರು ಹೇಳುತ್ತಾರೆ. 
ಆದರೆ ಯೆಹೋವನು ಹೇಳುವುದೇನೆಂದರೆ: “ದುಷ್ಟರು ಕುಗ್ಗಿಹೋದವರಿಂದ ಕದ್ದುಕೊಂಡಿದ್ದಾರೆ. ಅಸಹಾಯಕರು ದುಃಖದಿಂದ ನಿಟ್ಟುಸಿರು ಬಿಡುತ್ತಿದ್ದಾರೆ. ಆದ್ದರಿಂದ ನಾನು ಎದ್ದುನಿಂತು, ಆಯಾಸಗೊಂಡಿರುವ ಅವರನ್ನು ಕಾಪಾಡುವೆನು.” 
ಯೆಹೋವನ ಮಾತುಗಳು ಬೆಂಕಿಯಲ್ಲಿ ಏಳು ಸಲ ಶುದ್ಧೀಕರಿಸಿದ ಬೆಳ್ಳಿಯಂತೆ ಸತ್ಯವಾಗಿವೆ. 
ಯೆಹೋವನೇ, ಅಸಹಾಯಕರನ್ನು ಪರಿಪಾಲಿಸು. ಅವರನ್ನು ಶಾಶ್ವತವಾಗಿ ಸಂರಕ್ಷಿಸು. 
ಆ ದುಷ್ಟರು ಪ್ರಮುಖರಂತೆ ವರ್ತಿಸಿದರೂ ಅವರು ಕೇವಲ ನಕಲಿ ಆಭರಣಗಳಂತಿದ್ದಾರೆ. 
